ಕುರುಡು ಮೀನು

ಉತ್ತರ ಅಮೆರಿಕದ ಮಧ್ಯ ಭಾಗಗಳ ಗುಹೆ ಮತ್ತು ಭೂಗರ್ಭದೊಳಗೆ ಹರಿಯುವ ನದಿಗಳಲ್ಲಿ ವಾಸಿಸುವ ಮೀನು. ಹಲವಾರು ಕುಟುಂಬಗಳಿಗೆ ಸೇರಿದ ಮೀನುಗಳು ಕುರುಡು ಮೀನುಗಳಾಗಿವೆ. ಆಂಬ್ಲಿಯೋಪ್ಸಿಡೆ ಕುಟುಂಬಕ್ಕೆ ಸೇರಿದ ಆಂಬ್ಲಿಯೋಪ್ಲಿಸ್ ಸ್ಪೇಲಿಯ, ಆ. ರೋಸೆ ಹಾಗೂ ಚಿಲುಮೆಗಳಲ್ಲಿ ಕಾಣಸಿಸುವ ಕೋಲೊಗಾಸ್ಟರ್ ಜಾತಿಯ ಮೀನುಗಳನ್ನು ಸಾಮಾನ್ಯವಾಗಿ ಕುರುಡು ಮೀನುಗಳೆಂದು ಕರೆಯುತ್ತಾರೆ. ಈ ಕುಟುಂಬದ ಮೀನುಗಳಲ್ಲಿ ಕಣ್ಣುಗಳು ನಶಿಸುತ್ತ ಹೋಗಿ ಕೆಲವು ಪ್ರಭೇದಗಳಲ್ಲಿ ಸಂಪೂರ್ಣವಾಗಿ ಮಾಯವಾಗಿದೆ. ಗುದದ್ವಾರ ದೇಹದ ಮುಂದಿನ ಭಾಗದಲ್ಲಿರುವುದು ಇದರ ವೈಚಿತ್ರ್ಯ. ಈ ಕುಟುಂಬದ ಯಾವ ಮೀನೂ ಉದ್ದದಲ್ಲಿ 7.5 ಸೆಂಮೀ. ಗಿಂತಲೂ ಹೆಚ್ಚಾಗಿ ಬೆಳೆಯುವುದಿಲ್ಲ. ದೇಹದ ಮೇಲೆ ತಲೆಯಿಂದ ಬಾಲದವರೆಗೆ ಇರುವ ಪ್ಯಾಪಿಲಗಳು (ಸ್ಪರ್ಶೇಂದ್ರಿಗಳು) ಆಹಾರಾನ್ವೇಷಣೆಯಲ್ಲಿ ನೆರವಾಗುತ್ತವೆ. ಕಣ್ಣುಗಳು ಭಾಗಶಃ ಇಲ್ಲವೇ ಸಂಪೂರ್ಣವಾಗಿ ನಶಿಸಿ ಹೋಗಿರುವ ಇತರ ಜಾತಿಯ ಅನೇಕ ಮೀನುಗಳೂ ಉಂಟು. ಉದಾಹರಣೆಗೆ ಕ್ಯೂಬದ ಕುರುಡು ಮೀನುಗಳು (ಬ್ರಾಟುಲಿಡೀ ಕುಟುಂಬ). ಇವು ಭೂಗರ್ಭದ ಅಂತರ್ಜಲ ಗವಿಗಳಲ್ಲಿ ವಾಸಿಸುತ್ತವೆ.  ಸೂರ್ಯರಶ್ಮಿ ಹಾಯದ ಆಳ ಸಮುದ್ರದಲ್ಲಿನ ಇಪ್‍ನಾಪ್ಸ್ ಮರ್ರೇಯಿ ಮುಂತಾದವು. ಈ ಮೀನುಗಳಲ್ಲೂ ಆಹಾರನ್ವೇಷಣೆಗೆ ಅವುಗಳಲ್ಲಿರುವ ಪ್ಯಾಪಿಲ ಮುಂತಾದ ಸ್ಪರ್ಶೇಂದ್ರಿಯಗಳು ಸಹಾಯಕವಾಗಿರುತ್ತವೆ. ಇವಕ್ಕೂ ಸಾಮಾನ್ಯ ಬಳಕೆಯಲ್ಲಿ ಕುರುಡುಮೀನುಗಳೆಂದೇ ಹೆಸರಿದೆ.

(ಸಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ